ಜ್ವಾಲಾಮುಖಿಗಳಿಂದ ಬಹಿಸ್ಸರಣಗೊಂಡ (ಎಕ್ಸ್‍ಟ್ರೂಡೆಡ್) ಸಿಕತದ, ದ್ರವಿಸಿದ ಇಲ್ಲವೇ ಭಾಗಶಃ ದ್ರವಿಸಿದ ಶಿಲಾದ್ರವ ವಸ್ತು. ಭೂಮಿಯ ಅಂತರಾಳದಲ್ಲಿ ಅಧಿಕ ಶಾಖ ಮತ್ತು ಒತ್ತಡಗಳಿಂದ ಶಿಲೆಗಳು ದ್ರವರೂಪದಲ್ಲಿರುತ್ತವೆ. ಇಂಥ ಶಿಲಾಪಾಕ (ಮ್ಯಾಗ್ಮ) ಭೂಮಿಯ ಆಳವಾದ ಸೀಳಿಕೆಯ ಮುಖಾಂತರ ಇಲ್ಲವೆ ಅಗ್ನಿಪರ್ವತ ಶೈಥಿಲ್ಯಗಳ ಮೂಲಕ ಹೊರಹೊಮ್ಮುವುದೇ ಲಾವಾರಸ. ಶಿಲಾದ್ರವ ಭೂ ಅಂತರಾಳದಲ್ಲಿದ್ದರೆ ಶಿಲಾಪಾಕ, ಅದೇ ಭೂ ಮೇಲ್ಮೈ ಸೇರಿದರೆ ಲಾವಾರಸ ಅಥವಾ ಶಿಲಾರಸವಾಗುವುದು. ಲಾವಾರಸ ಭೂಮೇಲ್ಮೈಯನ್ನು ತಲಪಿ ಅಗ್ನಿಕುಂಡದ ಸುತ್ತ ನಿಧಾನವಾಗಿ ಹರಿದು ಘನೀಭವಿಸುತ್ತದೆ. ಇದಕ್ಕೆ ಆಮ್ಲೀಯ, ಕ್ಷಾರೀಯ ಇಲ್ಲವೆ ಅತಿಕ್ಷಾರೀಯ ಎಂಬ ಮೂರು ವಿಧದ ರಾಸಾಯನಿಕ ಸಂಯೋಜನೆಗಳಿವೆ. ಭೂಮಿಯ 90% ಶಿಲೆಗಳಲ್ಲಿ ಕ್ಷಾರ ಲಾವಾರಸಗಳೇ ಹೆಚ್ಚು. ಆದ್ದರಿಂದ ವಿಶಾಲ ವಿಸ್ತೀರ್ಣದ ಬೃಹತ್ ಲಾವಾರಸ ಪ್ರದೇಶಗಳಲ್ಲೆಲ್ಲ ಬಹುತೇಕ ಬಸಾಲ್ಟ್ ಶಿಲಾ ಸಂಯೋಜನೆ ಕಾಣುತ್ತೇವೆ. ಉದಾ: ದಖ್ಖನ್ ಬಸಾಲ್ಟ್ ಪ್ರಸ್ಥಭೂಮಿ. ಆಮ್ಲೀಯ ಲಾವಾರಸ ಅಧಿಕ ಸ್ನಿಗ್ಧತೆ ಪಡೆದಿದೆ ಎಂದೇ ಇದು ಹೆಚ್ಚು ವಿಸ್ತೀರ್ಣಕ್ಕೆ ಹರಡಿಕೊಂಡಿರುವುದಿಲ್ಲ. ಆದರೆ ಕ್ಷಾರೀಯ ಲಾವಾರಸದ ಸ್ನಿಗ್ಧತೆ ಬಲು ಕಡಿಮೆ ಇರುವುದರಿಂದ ಇದರ ಹರಿವು ವ್ಯಾಪಕವಾಗಿರುತ್ತದೆ. ಸಾಗರ ತಳದಲ್ಲಿಯ ಅಗ್ನಿಪರ್ವತಗಳಿಂದ ಹೊರ ಚೆಲ್ಲಿದ ಲಾವಾರಸ ವಿರೂಪ ಗೊಂಡ ಗುಳ್ಳೆಗಳ ಹಾಗೆ ಮುದ್ದೆಯಾಗಿದ್ದು ಇವು ದಿಂಬಿನಾಕಾರದಲ್ಲಿರು ವುದರಿಂದ ಇವನ್ನು ದಿಂಬಿನಾಕಾರದ ಲಾವಾರಸ ಎಂದು ಕರೆಯುವುದಿದೆ. ಇವು ದೊರೆಯುವ ಸ್ಥಳಗಳು ಹಿಂದೊಮ್ಮೆ ಸಾಗರದ ತಳಭಾಗವಾಗಿದ್ದು ವೆಂಬುದನ್ನು ಖಚಿತಪಡಿಸುತ್ತವೆ. ಉದಾ: 210 ಕೋಟಿ ವರ್ಷಗಳಷ್ಟು ಹಿಂದೆ ಚಿತ್ರದುರ್ಗ ಸಾಗರ ತಳದಲ್ಲಿತ್ತು. ಇದಕ್ಕೆ ಸಾಕ್ಷಿಯಾಗಿ ಮರಡಿಹಳ್ಳಿಯ ಸುತ್ತಮುತ್ತ ಕಂಡುಬರುವ ಲಾವಾರಸದ ದಿಂಬಿನಾ ಕೃತಿಗಳು. ಹಾಗೆಯೇ ಮುಂಬಯಿ ಪ್ರದೇಶ 60 ದಶಲಕ್ಷ ವರ್ಷಗಳಷ್ಟು ಹಿಂದೆ ಸಮುದ್ರ ತಳವಾಗಿತ್ತು ಎಂಬುದನ್ನು ಅಲ್ಲಿಯ ದಿಂಬುಲಾವಾರಸಗಳು ಸೂಚಿಸುತ್ತವೆ. ಈ ರಸದ ಮುದ್ದೆಗಳ ಕೇಂದ್ರಭಾಗದಲ್ಲಿ ಹೆಚ್ಚು ಕೊಳವೆಗಳಿರುವುವು. ಲಾವಾರಸದಲ್ಲಿ ಹುದುಗಿದ್ದ ಅನಿಲಗಳು ಹೊರಕ್ಕೆ ಹೋದ ಜಾಡುಗಳನ್ನು ಇವು ಸೂಚಿಸುತ್ತವೆ. ಮೇಲ್ಮೈ ಸೇರಿದ ಲಾವಾರಸ ನದಿಯಂತೆ ಹರಿದು ಘನೀಭವಿಸಿ ವಿವಿಧ ರೂಪಗಳನ್ನು ಪಡೆಯುವುದು. ಹರಿಯುವ ಲಾವಾರಸದೊಳಗೆ ಹುದುಗಿದ್ದ ವಾಯು ಗುಳ್ಳೆಗಳ ತೆರದಲ್ಲಿ ಹೊರಧಾವಿಸುವಾಗ ಮೇಲ್ಮೈಯಲ್ಲಿ ಬೊಬ್ಬೆಗಳೇಳುತ್ತವೆ. ಇವು ಲಾವಾ ಬೊಬ್ಬೆಗಳು (ಲಾವಾ ಬ್ಲಿಸ್ಯರ್ಸ್) ಕಣ್ಣು ಕೋರೈಸುವ ಬೆಳಕಿನ, ಕುದಿಕುದಿವ ಲಾವಾರಸ ನದಿಯಂತೆ ಹರಿದು ಆ ಹಾದಿಯಲ್ಲಿ ತಣ್ಣಗಾಗಿ ಹೆಪ್ಪುಗಟ್ಟಿದ ಲಾವಾಜಾಡಿಗೆ ಹರಿವುಗಳು (ಲಾವಾ ಫ್ಲೋಸ್) ಎಂದು ಹೆಸರು. ಅಗ್ನಿ ಪರ್ವತದ ಇಬ್ಬದಿ ಹಾಗೂ ಸುತ್ತಲೂ ಹಲವಾರು ಲಾವಾರಸ ಪ್ರವಾಹಗಳು ಘನೀಭವಿಸುವುದರಿಂದ ಅಲ್ಲಿ ಶಂಕಾಕೃತಿಯ ದಿಬ್ಬಗಳು (ಲಾವಾ ಕೋನ್ಸ್) ಉಂಟಾಗುತ್ತವೆ. ಹರಿಯುವ ಲಾವಾರಸ ಭೂಮಿಯ ಉಬ್ಬುತಗ್ಗುಗಳನ್ನು ಅನುಸರಿಸಿ ಪ್ರಪಾತವಿದ್ದರೆ ನದಿಜಲಪಾತದಂತೆ ದುಮುಕುವುದು, ಇದು ಲಾವಾರಸ ನಿರ್ಝರ (ಲಾವಾ ಕಾಸ್ಕೇಡ್). ಜಲಜಶಿಲೆಗಳೊಂದಿಗೆ ಅಂತಃರಸ್ತರಗಳಾಗಿಯೂ ಲಾವಾಪ್ರವಾಹಗಳು ಕಾಣಬರುತ್ತವೆ.

ಜಾಗೃತ ಅಗ್ನಿ ಪರ್ವತಗಳಲ್ಲಿ ಭೂಅಂತರಾಳದಿಂದ ಅಧಿಕಸಂಮರ್ದ ದಲ್ಲಿ ಮೇಲೇರಿ ಬರುವ ಲಾವಾರಸ ಅಗ್ನಿಪರ್ವತದ ದ್ವಾರದಿಂದ 100ರಿಂದ 300 ಮೀ ಎತ್ತರಕ್ಕೆ ಕಾರಂಜಿಯಂತೆ ಚಿಮ್ಮುತ್ತದೆ. ಇವು ಬೆಂಕಿಕಾರಂಜಿಗಳು. ಅಗ್ನಿಪರ್ವತದ ವಿಶಾಲ ದ್ವಾರದಲ್ಲಿ ಆಲಿಕೆಯಂಥ ಕುಳಿಯಲ್ಲಿ ಕುದಿವ ಶಿಲಾರಸ ನಿಧಾನವಾಗಿ ಘನೀಭವಿಸಿದಾಗ ಲಾವಾರಸ ಸರೋವರ (ಲಾವಾ ಲೇಕ್) ಉಂಟಾಗುತ್ತದೆ. ಸಮತಟ್ಟಾದ ಮೇಲ್ಮೈಯಲ್ಲಿ ಹರಿಯುವ ಲಾವಾರಸ ಘನೀಭವಿಸಿದಾಗ ಲಾವಾಮೈದಾನ ಏರ್ಪಡುತ್ತದೆ. ಲಾವಾರಸ ಪ್ರವಾಹಗಳು ಪ್ರಂಖಾನುವುಂಖವಾಗಿ ಹರಿದು ಘನಿಸಿ ನೂರಾರು ಚಕಿಮೀ ವಿಸ್ತೀರ್ಣದ ಲಾವಾ ಪ್ರಸ್ಥಭೂಮಿ (ಲಾವಾಪ್ಲೇಟೊ) ಮೈದಳೆಯ ಬಹುದು. ಉದಾ: ದಖ್ಖನ್ ಲಾವಾ ಪ್ರಸ್ಥಭೂಮಿ. ಅಲ್ಲಲ್ಲಿ ಲಾವಾದಿಬ್ಬಗ ಳಾಗಬಹುದು (ಲಾವಾ ಡೋಮ್ಸ್). ಭೂಅಂತರಾಳ ದಲ್ಲಿ ಲಾವಾರಸ ಅಲ್ಲಿಯ ಕುಹರದ ರೂಪ ಪಡೆಯುತ್ತದೆ. ಉದಾ: ಸಮಾಂತರ ಸಿಲ್‍ಗಳು, ಲಂಬ ಒಡ್ಡು ಅಥವಾ ಡೈಕುಗಳು ಅಂತಸ್ಸರಿತವಾಗಿರುತ್ತವೆ. ಘನೀಭವಿಸುತ್ತಿರುವ ಲಾವಾರಸಪದರಗಳ ತಳಭಾಗ ಮತ್ತೊಮ್ಮೆ ದ್ರವಿಸಿ ಹರಿದು ಸುರಂಗಗಳಾಗಬಹುದು (ಲಾವಾ ಟನ್ನೆಲ್ಸ್). 800ಕ್ಕೂ ಹೆಚ್ಚು ಜಾಗೃತ ಅಗ್ನಿಪರ್ವತಗಳು ಇಂದಿಗೂ ಸಹಸ್ರಾರು ಘನ ಕಿಮೀ ಲಾವಾರಸವನ್ನು ಹೊರತರುತ್ತಿವೆ. ಉದಾ: ಐಸ್‍ಲ್ಯಾಂಡಿನ ಜೀವಂತ ಅಗ್ನಿಪರ್ವತಗಳು ಹಾಗೂ ಜಪಾನಿನ, ಸಾಗರತಳಭಾಗದ ಅಗ್ನಿಪರ್ವತಗಳು ಮತ್ತು ಭಾರತದ ಬ್ಯಾರನ್ ಐಲ್ಯಾಂಡ್ (ಅಂಡಮಾನ್ ನಿಕೋಬಾರ್) ದ್ವೀಪಗಳು. ಕೆಲವೊಮ್ಮೆ ಬಸಾಲ್ಟ್ ಲಾವಾರಸ ನಿಧಾನವಾಗಿ ಘನೀಭವಿಸುವುದರಿಂದ ಷಣ್ಮುಖಿ ಸ್ತಂಭಾಕೃತಿಗಳಾಗುತ್ತವೆ. ಇವು ಕಂಬಗಳಂತೆ ಕಾಣುವುವು - ಇವಕ್ಕೆ ಕಲಮ್ನಾ ಬಸಾಲ್ಟ್ ಎಂದು ಹೆಸರು. ಉದಾ: ಮುಂಬಯಿಯ ಗಿಲ್ಬರ್ಟ್ ಹಿಲ್ಸ್‍ನಲ್ಲಿ, ಮಂಗಳೂರಿನ ಸಮೀಪವಿರುವಮಲ್ಪೆ ದ್ವೀಪಗಳಲ್ಲಿ ಈ ತೆರನಾದ ಸ್ತಂಭಾಕೃತಿಗಳು ಹೇರಳವಾಗಿವೆ.
 
(ನೋಡಿ- ಜ್ವಾಲಾಮುಖಿಗಳು)
(ನೋಡಿ- ಟುಫ್)
(ನೋಡಿ- ಅಗ್ನಿಶಿಲೆಗಳು)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ